ವಾಟ್ಸಾಪ್, ಇನ್‌ ಸ್ಟಾಗ್ರಾಮ್‌ ಸರ್ವರ್‌ ಡೌನ್: ಬಳಕೆದಾರರ ಪರದಾಟ

ನವದೆಹಲಿ: ಮೆಟಾ ಒಡೆತನದ ಜನಪ್ರಿಯ ಮೆಸೇಜ್ ಅಪ್ಲಿಕೇಶನ್ ವಾಟ್ಸಾಪ್, ಇನ್ ಸ್ಟಾಗ್ರಾಮ್ ಶನಿವಾರ ತಾಂತ್ರಿಕ ಸಮಸ್ಯೆಗೆ ತುತ್ತಾಗಿದೆ. ಸಂದೇಶ ಕಳುಹಿಸಲು, ಸ್ಟೇಟಸ್ ಅಪ್ ಲೋಡ್ ಮಾಡಲು ತೀವ್ರ ತೊಂದರೆಯಾಗಿದೆ. ಸ್ವಯಂಚಾಲಿತವಾಗಿ ಕರೆಗಳು ಹೋಗುತ್ತಿವೆ ಎಂದು ಬಳಕೆದಾರರು ದೂರಿದ್ದಾರೆ.

ಪ್ರೀತಿಪಾತ್ರರಿಗೆ ಸಂದೇಶ ಕಳಿಸಲಾಗದೆ.. ಇಷ್ಟದ ರೀಲ್ಸ್‌ ನೋಡದೆ ಹೆಣಗಾಡಿದರು. ಶೇ.81ರಷ್ಟು ಬಳಕೆದಾರರಿಗೆ ಸಂದೇಶ ಕಳುಹಿಸಲು…ಸ್ಟೇಟಸ್‌ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.

ಅಲ್ಲದೆ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ನಲ್ಲಿಯೂ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಬಳಕೆದಾರರು ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ.

ಆ್ಯಪ್ ಔಟೇಜ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಡೌನ್ ಡಿಟೆಕ್ಟರ್ ಪ್ರಕಾರ, ಸಂಜೆ 5:13 ರವರೆಗೆ ವಾಟ್ಸಾಪ್ ವಿರುದ್ಧ ಕನಿಷ್ಠ 463 ದೂರುಗಳು ದಾಖಲಾಗಿವೆ. ಶೇಕಡಾ 81 ರಷ್ಟು ವಾಟ್ಸಾಪ್‌ ಬಳಕೆದಾರರು ಸಂದೇಶ ಕಳುಹಿಸುವಲ್ಲಿ ತೊಂದರೆ ಅನುಭವಿಸಿದರು. ಶೇಕಡಾ 16 ರಷ್ಟು ಜನರು ಅಪ್ಲಿಕೇಶನ್‌ನ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಶೇ. 4ರಷ್ಟು ಜನ ಲಾಗಿನ್ ಸಮಯದಲ್ಲಿ ಸಮಸ್ಯೆ ಅನುಭವಿಸಿದ್ದಾರೆ. UPI ಮೂಲಕ ಹಣ ಪಾವತಿ ಮಾಡುವಾಗ ತೊಂದರೆಯಾಗಿದೆ ಎಂದು ವರದಿಯಾಗಿದೆ. ತಾಂತ್ರಿಕ ಸಮಸ್ಯೆಗಳಿಂದ ಹೀಗಾಗಿದೆ ಎಂದು ತಿಳಿದುಬಂದಿದೆ

ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ಇದೇ ರೀತಿ ವಾಟ್ಸಾಪ್‌ ಸ್ಥಗಿತಗೊಂಡಿತ್ತು. ಆಗ ಪ್ರಪಂಚದಾದ್ಯಂತ ಅನೇಕ ಬಳಕೆದಾರರು ತೊಂದರೆ ಅನುಭವಿಸಿದ್ದರು. WhatsApp ಆ್ಯಪ್, WhatsApp ವೆಬ್ ಮೂಲಕ ಸಂದೇಶ ಕಳುಹಿಸಲು ಅಥವಾ ಕರೆ ಮಾಡಲು ಸಾಧ್ಯವಾಗಲಿಲ್ಲ. Down Detector ಪ್ರಕಾರ ಅಂದು 9,000 ಕ್ಕೂ ಹೆಚ್ಚು ಜನರು ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ದೂರಿದ್ದಾರೆ.